Sunday, June 13, 2021

ಗುರುವಾಣಿ 10: ಹನುಮಂತನ ಸಂವಹನ ಕೌಶಲ್ಯ

ಗುರುವಾಣಿ 10: ಹನುಮಂತನ ಸಂವಹನ ಕೌಶಲ್ಯ

 ||ಓಂ ಆಂಜನೇಯಾಯ ನಮಃ||

Voice of RK


ಹೊಳೆವ ಹೊನ್ನ ಮೈಬಣ್ಣ, ಗುಂಗುರು ಕೇಶರಾಶಿ, ಕರ್ಣಕುಂಡಲ  ಧಾರಿಯಾದ ಸೀತಾ ಮಾತೆಯ ಶೋಕ ನಿವಾರಕನಾದ     ಹನುಮಂತನ ಸಂವಹನ ಕೌಶಲ್ಯವನ್ನು ತಿಳಿಯುವ ಚಿಕ್ಕ ಪ್ರಯತ್ನವೇ ಇಂದಿನ ಗುರುವಾಣಿ. 

ರಾಮ ಹನುಮರ ಪ್ರಥಮ ಭೇಟಿಯ ಬಗ್ಗೆ ನಾವು ಹಿಂದಿನ ವಾರ ತಿಳಿದುಕೊಂಡಿದ್ದೇವೆ. ಹನುಮಂತ ತನ್ನ ವಾಕ್ಚಾತುರ್ಯದಿಂದ ರಾಮ ಲಕ್ಷ್ಮಣರ ಮನಸ್ಸು ಮತ್ತು ಹೃದಯವನ್ನು ಗೆದ್ದು ಅಯೋಧ್ಯೆಯ ರಾಜಕುಮಾರರು ಬಂದ ಕಾರಣವನ್ನು ತಿಳಿಯುತ್ತಾನೆ. ಅಯೋಧ್ಯ/ಧ್ಯಾ ಪುರುಷ ಶ್ರೀ ರಾಮ ಹನುಮಂತನ ಸಂವಹನ ಸಾಮರ್ಥ್ಯವನ್ನು ಮೆಚ್ಚಿ ಕಪಿಶ್ರೇಷ್ಠನನ್ನು ಅಭಿನಂದಿಸುತ್ತಾನೆ.

ಹಾಗೂ ಪರಿಣಾಮಕಾರಿ ಸಂವಹನದ ಸಪ್ತಸೂತ್ರಗಳನ್ನು ಶ್ರೀರಾಮಚಂದ್ರ ವಿವರಿಸುತ್ತಾನೆ.ಈ ಸೂತ್ರಗಳನ್ನು ವಾಲ್ಮೀಕಿ ರಾಮಾಯಣದಲ್ಲಿ ಉಲ್ಲೇಖಿಸಲಾಗಿದೆ. ಆ ಸಪ್ತ ಸೂತ್ರಗಳು ಯಾವುವೆಂದರೆ : 

ಸೂತ್ರ 1: ಅಗತ್ಯಕ್ಕೆ ತಕ್ಕಂತೆ ಸಂಕ್ಷಿಪ್ತವಾಗಿ ಮಾತನಾಡುವುದು.

ಸೂತ್ರ2.ಮಾತಿನಲ್ಲಿ ಸ್ಪಷ್ಟತೆ ಇರುವುದು.

ಸೂತ್ರ3:ಮಾತನಾಡುವಾಗ/ಮಾತಿನಲ್ಲಿ ಯಾವುದೇ ವ್ಯಾಕರಣ ದೋಷವಿಲ್ಲದಂತೆ ಮಾತನಾಡುವುದು.

ಸೂತ್ರ 4: ಸಂದರ್ಭಕ್ಕೆ ಸೂಕ್ತವಾದ ಪದಗಳನ್ನು ಬಳಸಿ ಮಾತನಾಡುವುದು.

ಸೂತ್ರ 5 :ಸ್ಪಷ್ಟವಾಗಿ ಕೇಳುವಂತೆ ಮದ್ಯಮ ಧ್ವನಿಯಲ್ಲಿ ಮಾತನಾಡುವುದು.

ಸೂತ್ರ 6: ಮದ್ಯಮ ಧ್ವನಿಯೊಂದಿಗೆ ಪದಗಳ ಉಚ್ಛಾರಣೆ ಸಂಗೀತದಂತೆ ಲಯಬದ್ಧವಾಗಿರುವುದು, ಹಾಗೂ

ಸೂತ್ರ 7: ಆಡುವ ಮಾತು ನೇರವಾಗಿ ಹೃದಯಕ್ಕೆ ಮುಟ್ಟುವಂತೆ ಮಾತನಾಡುವುದು.

 ಇವೆ/ಇವೇ ಪರಿಣಾಮಕಾರಿ ಸಂವಹನದ ಸಪ್ತ ಸೂತ್ರಗಳು.

ಮುಖ್ಯಪ್ರಾಣ ಆಂಜನೇಯ ಕೇವಲ ದೈಹಿಕವಾಗಿ ಬಲಶಾಲಿಯಾಗಿರದೆ ಭಾಷೆ, ವೇದಾ/ದ ಹಾಗೂ ವಿಜ್ಞಾನದಲ್ಲಿ ಪಾಂಡಿತ್ಯ ಹೊಂದಿದ್ದ. ಆದ್ದರಿಂದಲೇ ಈತನನ್ನು ಜ್ಞಾನ ಗುಣಗಳ ಸಾಗರ ನೆಂದು ಸಂಬೋಧಿಸಲಾಗುತ್ತದೆ. 

ಆಂಜನೇಯ ಭಕ್ತರೇ ‘ಮಾತು ಬಲ್ಲವನಿಗೆ ಜಗಳವಿಲ್ಲ ಊಟ ಬಲ್ಲವನಿಗೆ ರೋಗವಿಲ್ಲ’ ಎಂಬ ಗಾದೆಯಂತೆ ಸಂವಹನದ ಪರಿಣಾಮಕಾರಿ ಸಪ್ತ ಸೂತ್ರಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡು  ಈ ಜೀವನಪಥದಲ್ಲಿ ನಾವೆಲ್ಲರೂ ಮುಂದೆ ಮುಂದೆ ಸಾಗೋಣ.

||ಓಂ ಆಂಜನೇಯಾಯ ನಮಃ||



ಗುರುವಾಣಿ 9: ರಾಮ ಹನುಮರ ಮಿಲನ

ಗುರುವಾಣಿ 9: ರಾಮ ಹನುಮರ ಮಿಲನ 

Voice of RK


ಇಂದ್ರಿಯಗಳ ಒಡೆಯ, ತಪಸ್ವಿಗಳಲ್ಲಿ ಅತಿ ಶ್ರೇಷ್ಠ ಅಷ್ಟಸಿದ್ಧಿ ಮತ್ತು ನವ ನಿಧಿಗಳನ್ನು ಕೊಡುವಾತ,ಮೂರುಲೋಕಗಳಲ್ಲಿಯೂ ಪ್ರಸಿದ್ಧ, ಮಹಿರಾವಣ ಮರ್ಧನ, ಅಂಜನಾ ಗರ್ಭಸಂಭೂತ/ಪುತ್ರ ಈ ವಾನರವೀರ ಹಾಗೂ ಅಯೋಧ್ಯಾನಗರಿಯ ಆದರ್ಶಪುರುಷ ಸೀತಾವಲ್ಲಭ ಶ್ರೀರಾಮರ ಪ್ರಥಮ ಭೇಟಿಯ ಬಗ್ಗೆ ತಿಳಿಯುವ/ಬೆಳಕು ಚೆಲ್ಲುವ ಒಂದು ಸಣ್ಣ ಪ್ರಯತ್ನವೇ ಇಂದಿನ ಗುರುವಾಣಿ.

 ರಾಮ ಮತ್ತು ಹನುಮರ ಪ್ರಥಮ ಭೇಟಿಯ ಬಗ್ಗೆ ಗ್ರಂಥಗಳಲ್ಲಿ ವಿಭಿನ್ನ ಉಲ್ಲೇಖಗಳಿದ್ದು, ಒಂದು ಮೂಲದ ಪ್ರಕಾರ ಲಂಕಾಧಿಪತಿ ದಶಕಂಠ ರಾವಣ ಸೀತಾಮಾತೆಯನ್ನು ಅಪಹರಿಸಿದ ನಂತರ ರಾಮ ಲಕ್ಷ್ಮಣರು ಸೀತಾಮಾತೆಯನ್ನು ಅರಸುತ್ತಾ/ಹುಡುಕುತ್ತಾ ದಕ್ಷಿಣದ ಕಡೆಗೆ ಸಾಗುತ್ತಾರೆ 

ಅವರ ಅನ್ವೇಷಣೆ/ಹುಡುಕಾಟ ಅವರನ್ನು ಸುಗ್ರೀವ ಮತ್ತು ಅವನ ಮಂತ್ರಿಗಳಿದ್ದ ಪಂಪಾ ಸರೋವರದ ಬಳಿಯ ಋಷ್ಯಮೂಕ ಪರ್ವತಕ್ಕೆ ಕರೆ ತರುತ್ತದೆ. ಇದು ನಮ್ಮ ಕರ್ನಾಟಕದ ಹಂಪಿಯ ಬಳಿ ಇದೆ. 

ಈ ಪರ್ವತದ ಬಳಿ ಸುತ್ತಾಡುತ್ತಿರುವ/ಅಲೆದಾಡುತ್ತಿರುವ ಈ ಸಹೋದರರನ್ನು ವಾನರ ರಾಜನಾದ ಸುಗ್ರೀವ ದೂರದಿಂದಲೇ ಅನುಮಾನದಿಂದ ಗಮನಿಸುತ್ತಾನೆ.

ತನ್ನನ್ನು ಕೊಲ್ಲಲು ವಾಲಿಯೇ ಇಬ್ಬರು ಶಕ್ತಿಶಾಲಿ ಪುರುಷರನ್ನು ಕಳುಹಿಸಿರಬೇಕೆಂದು ಭಾವಿಸುತ್ತಾನೆ.

 ಸುಗ್ರೀವನ ಆಜ್ಞೆಯಂತೆ ಈ ಅಪರಿಚಿತ ಶಕ್ತಿಶಾಲಿ ಪುರುಷರು ಯಾರೆಂದು ತಿಳಿಯಲು ಹನುಮಂತ ಬ್ರಾಹ್ಮಣವೇಷದಲ್ಲಿ ಇವರನ್ನು ಭೇಟಿಯಾಗಿ ಇವರಿಬ್ಬರ ಉದ್ದೇಶವೇನೆಂದು ತಿಳಿಯುತ್ತಾನೆ.

ಸದ್ಗುಣಶೀಲ ಮತ್ತು ದೈವಿಕ/ದೇವಾಂಶ ಸಂಭೂತ ನಾದ ಈತ, ರಾಮಲಕ್ಷ್ಮಣರಿಗೆ ತನ್ನನ್ನು ಅತ್ಯಂತ ವಿನಯದಿಂದ ಪರಿಚಯಿಸಿಕೊಳ್ಳುತ್ತಾನೆ.

 ಈ ಕಪಿಶ್ರೇಷ್ಠನ ಮಾತಿನ ಜಾಣ್ಮೆಗೆ ರಾಮಲಕ್ಷ್ಮಣರು ಮಾರುಹೋಗುತ್ತಾರೆ. ಆಗ ಈ ದಶರಥಪುತ್ರರು ತಾವು ಬಂದ ಕಾರಣವೇನೆಂದು ಹನುಮಂತನಿಗೆ ತಿಳಿಸುತ್ತಾರೆ. ವಿಷಯಯನ್ನು ಅತ್ಯಂತ ಚಾತುರ್ಯದಿಂದ ಗ್ರಹಿಸಿದ ಹನುಮಂತ ರಾಮನ ಕಾಲಿಗೆ ಬಿದ್ದು, ಈ ಸಹೋದರರನ್ನು ತನ್ನ ಭುಜದ ಮೇಲೆ ಕೂರಿಸಿಕೊಂಡು ಸುಗ್ರೀವನಿರುವಲ್ಲಿಗೆ ಕೊಂಡೊಯ್ಯುತ್ತಾನೆ ಮತ್ತು ಸುಗ್ರೀವನಿಗೆ ರಾಮಲಕ್ಷ್ಮಣರನ್ನು ಪರಿಚಯಿಸುತ್ತಾನೆ. ಇದುವೇ ರಾಮ ಹನುಮರ ಪ್ರಥಮ ಮಿಲನದ ವೃತ್ತಾಂತ. ಈ ಅಪರೂಪದ ಮಿಲನದ ನಂತರ ಏನಾಯಿತು ಎನ್ನುವ ವಿಷಯ  ತಮಗೆಲ್ಲರಿಗೂ ತಿಳಿದಿದೆ.. ಈ ಭಕ್ತವತ್ಸಲ. ರಘುಪತಿ ದಾಸನನ್ನು ನಾವೆಲ್ಲರೂ ಮತ್ತೆಮತ್ತೆ ಸ್ಮರಿಸೋಣ.


||ಓಂ ಆಂಜನೇಯಾಯ ನಮಃ||


ಗುರುವಾಣಿ 8: ಆಂಜನೇಯನಿಗೇಕೆ ದೇವರ ಪಟ್ಟ?

ಗುರುವಾಣಿ 8:  ಆಂಜನೇಯನಿಗೇಕೆ ದೇವರ ಪಟ್ಟ? 

 ಮನೋಜವಂ ಮಾರುತತುಲ್ಯವೇಗಂ 

ಜಿತೇಂದ್ರಿಯಂ ಬುದ್ಧಿಮತಾಂ ವರಿಷ್ಠಂ |

ವಾತಾತ್ಮಜಂ ವಾನರಯೂಥಮುಖ್ಯಂ

ಶ್ರೀರಾಮ ದೂತಂ ಶರಣಂ ಪ್ರಪದ್ಯೇ ||

Voice of RK


ಶ್ರೀರಾಮಚಂದ್ರನಿಗೆ ಅತ್ಯಂತ ಪ್ರಿಯನೂ  ವಾಯುದೇವರ ಪ್ರೇಮಪುತ್ರನೂ/ಪ್ರೇಮಸುತನೂ ಸೀತಾಮಾತೆಯ ಹುಡುಕುವ ಸಾಹಸಕ್ಕೆ ಪಣತೊಟ್ಟವನೂ, ಸೀತೆಗಾಗಿ ಕಡಲನ್ನೇ ಹಾರಿ, ರಾಮನಿಗಾಗಿ ಸೇತುವೆ ಕಟ್ಟಿ,  ಲಕ್ಷ್ಮಣನಿಗಾಗಿ ಬೆಟ್ಟವನ್ನೇ ಹೊತ್ತು, ದಾಸರಲ್ಲಿ ದಾಸ ನೆನೆಸಿದ ವೀರಾಧಿವೀರ ಆಂಜನೇಯನಿಗೆ ಸಾಷ್ಟಾಂಗ ನಮಸ್ಕಾರಗಳು.

 ಸಕಲ ಕಷ್ಟಗಳನ್ನು ಪರಿಹರಿಸುವ, ಇಷ್ಟಾರ್ಥಗಳನ್ನು ನೆರವೇರಿಸುವ ಅಷ್ಟಸಿದ್ಧಿಗಳನ್ನು ನೀಡುವ ಈ ಮಹಾಬಲ ಪರಾಕ್ರಮಿ ಶ್ರೀರಾಮನ ಹರ್ಷದ ಆಲಿಂಗನಕ್ಕೆ ಸಹಿ ಎನಿಸಿದ, ಇಷ್ಟಲ್ಲದೆ ನೀನು ನನ್ನ ತಮ್ಮ ಭರತನಿಗೆ ಸಮನೆಂದು ಶ್ರೀರಾಮಚಂದ್ರನಿಂದಲೇ ಪ್ರಶಂಸೆಗೊಳಗಾದ. ರಾಮಾಯಣದ ಅನೇಕ ಪಾತ್ರಗಳು ವಿಶೇಷವೆನಿಸಿದರೂ ರಾಮಲಕ್ಷ್ಮಣರ ನಂತರ ಈ ವಾನರಶ್ರೇಷ್ಠನಿಗೇ ದೇವರ ಪಟ್ಟವೇಕೆ? ವಿಶೇಷ ಪೂಜೆ ಹಾಗೂ ಪಾರಾಯಣವೇಕೆ?

 ಈ ಕಪಿ ಶ್ರೇಷ್ಠ  ತಾನು ಭಕ್ತನೆಂದು ಎಂದೂ ಸೊಕ್ಕಿ ಮೆರೆಯಲಿಲ್ಲ,ಶಕ್ತನೆಂದು ಡಂಭ ಮಾಡಲಿಲ್ಲ. ನೀರಿಗಾಗಿ ಬಾವಿಯಲ್ಲಿ ಇಳಿ ಬಿಟ್ಟ ತಾಮ್ರದ ಕೊಡ ಹೇಗೆ ತಲೆಬಾಗಿಸಿ ಇನ್ನಷ್ಟು ಬೇಕು ಹೃದಯಕ್ಕೆ ರಾಮ ಎಂಬಂತೆ ನೀರನ್ನು ತುಂಬಿಕೊಳ್ಳುತ್ತದೆಯೋ,  ಹಾಗೆಯೇ ಈ ಆಂಜನೇಯ ರಾಮನಾಮವೆಂಬ ರಸಾಮೃತವನ್ನು ಹೀರುತ್ತಾ ಶ್ರೀರಾಮಚಂದ್ರನ ಬಂಟನಾಗಿ ತಲೆ ಬಾಗುತ್ತಿದ್ದ. ಆದ್ದರಿಂದಲೇ ಈ ವಾನರ ವೀರನಿಗೆ ಅಯೋಧ್ಯಾ ಪುರುಷನಾದ ಶ್ರೀರಾಮಚಂದ್ರನಿಂದ ವಿಶೇಷ ಉಡುಗೊರೆಯಾಗಿ ‘ದೇವರ ಪಟ್ಟ’ ಹಾಗೂ ‘ಪ್ರತ್ಯೇಕ ಗುಡಿಯಲ್ಲಿ ಪೂಜೆ’ ಯ ಭಾಗ್ಯ ದೊರಕಿತು.

 ಆಂಜನೇಯ ಭಕ್ತರೇ ಹೇಗೆ ನೀರಲ್ಲಿ ಬಿಟ್ಟ ತಾಮ್ರದ ಕೊಡ ತಲೆಬಾಗಿಸಿ ತನ್ನ ತುಂಬ ನೀರನ್ನು ತುಂಬಿಸಿಕೊಳ್ಳುತ್ತದಯೋ  ಹಾಗೆಯೇ ಈ ಆಂಜನೇಯನಿಗೆ ತಲೆಬಾಗಿಸಿ  ಈ ಮನಸ್ಸೆಂಬ/ಮನವೆಂಬ ಕೊಡದಲ್ಲಿ ಅಷ್ಟಗುಣಗಳನ್ನು ತುಂಬಿಕೊಂಡು ಕೇಸರಿ ಪುತ್ರನ ಕೃಪೆಗೆ ಪಾತ್ರರಾಗೋಣ.

||ಓಂ ಆಂಜನೇಯಾಯ ನಮಃ||



ಗುರುವಾಣಿ 7 | ಪಂಚಮುಖಿ ಆಂಜನೇಯನ ಮಹಿಮೆ

ಗುರುವಾಣಿ 7 | ಪಂಚಮುಖಿ ಆಂಜನೇಯನ ಮಹಿಮೆ

 ಮನೋಜವಂ ಮಾರುತತುಲ್ಯವೇಗಂ 

ಜಿತೇಂದ್ರಿಯಂ ಬುದ್ಧಿಮತಾಂ ವರಿಷ್ಠಂ |

ವಾತಾತ್ಮಜಂ ವಾನರಯೂಥಮುಖ್ಯಂ

ಶ್ರೀರಾಮ ದೂತಂ ಶರಣಂ ಪ್ರಪದ್ಯೇ ||

Voice of RK



ವಾನರ ಸೇನೆಯ ಜೊತೆಗೂಡಿ
ಸಮುದ್ರದಲ್ಲಿ ಸೇತುವೆಯನ್ನು ನಿರ್ಮಿಸಿ ದಶಕಂಠ ರಾವಣ ಮತ್ತು ಆತನ ಸೈನ್ಯವನ್ನು ಧ್ವಂಸ ಮಾಡಿ ಸೀತಾ ಮಾತೆಯನ್ನು ಬಂಧನದಿಂದ ಮುಕ್ತಗೊಳಿಸಿ, ಮಹಾಭಾರತ ಯುದ್ಧದಲ್ಲಿ ಅರ್ಜುನನ ಧ್ವಜ ಭೇರಿ ಮೊಳಗಿಸಿ ಪಾಂಡವರಿಗೆ ಜಯ ದೊರಕಿಸಿಕೊಟ್ಟ ಆಂಜನೇಯ ಹಿರಿಮೆ ಮೂರು ಲೋಕಕ್ಕೇ ತಿಳಿದ ವಿಷಯ. ಹಾಗಾಗಿ ಈ ವಜ್ರಕಾಯನ ದೇವಾಲಯಗಳು ಅಸಂಖ್ಯಾತ ಸಂಖ್ಯೆಯಲ್ಲಿವೆ.
 ಏಕಮುಖಿ ಆಂಜನೇಯನ ಆರಾಧನೆ ಸರ್ವೇಸಾಮಾನ್ಯವಾಗಿ ಕಂಡರೂ, ಪಂಚಮುಖಿ ಆಂಜನೇಯನ ಆರಾಧನೆ ಅತಿ ಶ್ರೇಷ್ಠ ಹಾಗೂ ವಿಶಿಷ್ಟವಾದದ್ದು.
ಪಂಚಮುಖಿ ಆಂಜನೇಯನ ವಿಶೇಷತೆಯನ್ನು ಅರಿಯುವ ಚಿಕ್ಕ ಪ್ರಯತ್ನವೇ ಇಂದಿನ ಗುರುವಾಣಿ. ಸಂಸ್ಕೃತದಲ್ಲಿ ಪಂಚ ಎಂದು ಕರೆಯಲ್ಪಡುವ ಸಂಖ್ಯೆ ಹಿಂದೂ ಧರ್ಮದ ವಿವಿಧ ಸಿದ್ಧಾಂತಗಳಲ್ಲಿ ವಿಶಿಷ್ಟ ಮಹತ್ವವನ್ನು ಹೊಂದಿದೆ.
 ತತ್ವಶಾಸ್ತ್ರ, ಧರ್ಮಶಾಸ್ತ್ರ, ಆಧ್ಯಾತ್ಮಿಕ, ಆಯುರ್ವೇದ, ಜ್ಯೋತಿಷ್ಯ ಇತ್ಯಾದಿ ಕ್ಷೇತ್ರಗಳಲ್ಲಿ ವಿವಿಧ ಪರಿಕಲ್ಪನೆಗಳೊಂದಿಗೆ ಸಂಖ್ಯೆ ಐದನ್ನು ಬಳಸಲಾಗುತ್ತದೆ. ಪಂಚಾಂಗ, ಪಂಚ ಮಹಾಭೂತಗಳು, ಪಂಚ ಜ್ಞಾನೇಂದ್ರಿಯಗಳು, ಪಂಚ ಕರ್ಮೇಂದ್ರಿಯಗಳು, ಪಂಚ ಕೋಶಗಳು, ಪಂಚ ಮಹಾಯಜ್ಞ, ಪಂಚ ಪಾಂಡವರು, ಪಂಚಗವ್ಯ ಇತ್ಯಾದಿಗಳು ಹಿಂದೂ ಧರ್ಮದಲ್ಲಿ ವಿಶೇಷತೆಯನ್ನು ಹೊಂದಿವೆ. ಹಾಗೆಯೇ ಪಂಚಮುಖಿ ಆಂಜನೇಯನ ಆರಾಧನೆ ಕೂಡ ಒಂದು ವಿಶೇಷವೇ ಸರಿ.
 ಪಂಚಮುಖ ಆಂಜನೇಯನ ವಿರಾಟ ರೂಪವಾಗಿದ್ದು, ಪೂರ್ವದಲ್ಲಿಯ ವಾನರ ಮುಖ, ಕಾಮ, ಕ್ರೋಧ, ಮದ, ಮೋಹ, ಮತ್ಸರ ಎಂಬ ಶತ್ರುಗಳನ್ನು ಸಂಹರಿಸಿದರೆ , ದಕ್ಷಿಣದಲ್ಲಿಯ ನರಸಿಂಹ ಮುಖ. ಭಯ ಬಾಧೆಗಳನ್ನು ನಿವಾರಿಸುತ್ತದೆ. ಪಶ್ಚಿಮದ ಗರುಡ ಮುಖ ರೋಗ ಮತ್ತು ನಕಾರ ಪ್ರಭಾವಗಳನ್ನು ತಡೆಯುತ್ತದೆ. ಉತ್ತರದ ವರಾಹ ಮುಖ ಸಂಪತ್ತು ಮತ್ತು ಸಮೃದ್ಧಿಯನ್ನು ಕೊಡುತ್ತದೆ ಹಾಗೂ ಊರ್ಧ್ವ ದ ಹಯಗ್ರೀವ ಮುಖ ವಿದ್ಯೆ ಮತ್ತು ಧ್ಯಾನದ ಸಂಕೇತ.
ಒಂದು ಗ್ರಂಥ ಮೂಲದ ಪ್ರಕಾರ ಪಾತಾಳ ಲೋಕದ ದೊರೆ ಹಾಗೂ ರಾವಣನ ಸಹೋದರ ಅಹಿರಾವಣ ವಿಭೀಷಣನ ವೇಷ ಧರಿಸಿ ರಾಮ ಮತ್ತು ಲಕ್ಷ್ಮಣರನ್ನು  ಅಪಹರಿಸಿ ಪಾತಾಳ ಲೋಕದಲ್ಲಿ ಬಂಧಿಸುತ್ತಾನೆ. ಪಾತಾಳ ಲೋಕದಲ್ಲಿ ಬಂಧಿಯಾಗಿರುವ ರಾಮ ಲಕ್ಷ್ಮಣರನ್ನು ರಕ್ಷಿಸಲು ವಿರಾಂಜನೇಯ ಪಂಚಮುಖಿ ವಿರಾಟ್ ಟ ರೂಪ ಧರಿಸಿ ರಾಕ್ಷಸರನ್ನು ಸಂಹರಿಸಿ, ರಾಮ ಲಕ್ಷ್ಮಣರಿಗೆ ಬಿಡುಗಡೆಯ ದಾರಿಯನ್ನು ತೋರಿಸುತ್ತಾನೆ.
 ತನ್ನ ಪಂಚ ಮುಖಗಳಿಂದ ವಿರಾಟ ರೂಪವನ್ನು ತೋರಿದ ಆಂಜನೇಯನನ್ನು ನಾವೆಲ್ಲರೂ ಭಕ್ತಿಯಿಂದ ಆರಾಧಿಸಿ ಅಜ್ಞಾನ, ನಕಾರಾತ್ಮಕತೆ, ಮಾನಸಿಕ ಅಶಾಂತಿಯಿಂದ ಮುಕ್ತಿ ಪಡೆದು, ಈ ಜೀವನ ಪಥದಲ್ಲಿ ಮುಂದೆ ಮುಂದೆ ಸಾಗೋಣ. 

||ಓಂ ಆಂಜನೇಯ ನಮಃ||


ಗುರುವಾಣಿ 6: ಆಂಜನೇಯನ ಭಕ್ತಿ

 ಗುರುವಾಣಿ 6: ಆಂಜನೇಯನ ಭಕ್ತಿ

Voice of RK


 ಸಾಧು ಸಂತರ ರಕ್ಷಕ, ಅಸುರರ ಸಂಹಾರಕ, ಈಶ್ವರ ಅವತಾರಿ ಆಂಜನೇಯನ ಭಕ್ತಿ ಅಸಾಮಾನ್ಯವಾದದ್ದು. ಶ್ರೀಕೃಷ್ಣ ವಚನಾಮೃತ ಭಗವದ್ಗೀತೆ ಮತ್ತು ಹಿಂದೂ ಪುರಾಣ ಗ್ರಂಥಗಳಲ್ಲಿ ಭಕ್ತಿ ಎಂಬ ಪದಕ್ಕೆ ವಿಶೇಷ ವ್ಯಾಖ್ಯಾನವಿದೆ. ಒಂದು ವ್ಯಾಖ್ಯಾನದ ಪ್ರಕಾರ ಭಕ್ತಿ ಎಂಬುದು ದೇವರ ಆನಂದವನ್ನು ಮೆಲುಕು ಹಾಕಿ ಭೌತಿಕ ಬಂಧನ, ಅಜ್ಞಾನ, ಮತ್ತು ದುಃಖದಿಂದ ಬಿಡುಗಡೆ ಹೊಂದುವ ಮಾರ್ಗ. ಇದು ಆಧ್ಯಾತ್ಮಿಕ ಅಭ್ಯಾಸ ಹಾಗೂ ದೈವಿಕ ಮಾರ್ಗ.

 ಶುದ್ಧ, ನಿಸ್ವಾರ್ಥ ಹಾಗೂ ದೈವಿಕ ಭಕ್ತಿಗೆ ಮೆಚ್ಚಿ ಶ್ರೀ ರಾಮನೊಂದಿಗೆ ಪೂಜೆಗೆ ಯೋಗ್ಯನಾದ ಈ ವಾಯುಪುತ್ರನ ಭಕ್ತಿಯ ಗಾಢತೆಯನ್ನು ಅರಿತುಕೊಳ್ಳುವ ಪ್ರಯತ್ನವೇ ಇಂದಿನ ಗುರುವಾಣಿ.

 ಭಕ್ತಿ ಪ್ರೀತಿ ಎಂಬ ಬಂಧನದ ಕೊಂಡಿಯಿಂದ ಎರಡು ಮನಸ್ಸುಗಳನ್ನು ಬೆಸೆಯುತ್ತದೆ. ಶ್ರೇಷ್ಠ ಭಕ್ತಿ ಜೀವನವನ್ನು ಆನಂದವನ್ನು ಆಗಿಸುತ್ತದೆ. ಆದ್ದರಿಂದ ಭಕ್ತಿಯನ್ನು ಆನಂದ ಸ್ವರೂಪವೆಂದು ಕರೆಯುತ್ತಾರೆ. ಭಗವದ್ಗೀತೆಯ ಭಕ್ತಿಯೋಗದಲ್ಲಿ ಶ್ರೀಕೃಷ್ಣ ಹೇಳಿದ ಹಾಗೆ ಯಾವ ಭಕ್ತ ತನ್ನ ಮನಸ್ಸನ್ನು ಏಕಾಗ್ರತೆಗೆ ನಿರಂತರ ಭಜನೆ ಮತ್ತು ಜ್ಞಾನಗಳಿಂದ ಪರಮೇಶ್ವರನನ್ನು ಬಯಸುತ್ತಾನೋ ಅವನೇ ನಿಜವಾದ ಭಕ್ತ. ಭಕ್ತಿ ಯೋಗದ ಪ್ರಕಾರ ಭಗವಂತನನ್ನು ಒಲಿಸಿಕೊಳ್ಳಲು ಒಂಬತ್ತು ಬಗೆಯ ಭಕ್ತಿ ಮಾರ್ಗಗಳಿವೆ. ಶ್ರವಣ, ಕೀರ್ತನ, ಸ್ಮರಣೆ, ಪಾದ ಸೇವೆ, ಅರ್ಚನೆ, ವಂದನೆ ದಾಸ್ಯ, ಸಖ್ಯ, ಹಾಗೂ ಆತ್ಮ ನಿವೇದನೆ. 

ಇಂದ್ರಿಯಗಳಿಗೆ ಒಡೆಯನಾದ ಹನುಮಂತನ ಭಕ್ತಿ ಹೇಗಿತ್ತೆಂದರೆ ನಾವೊಂದು ನಿದರ್ಶನವನ್ನು ನೋಡೋಣ.

 ಭಗವಾನ್ ಶ್ರೀರಾಮ ವನವಾಸದಿಂದ ರಾಜ್ಯಕ್ಕೆ ಮರಳಿ ಬಂದ ನಂತರ ಒಂದು ದೇವ ಸಭೆ ನಡೆಯುತ್ತದೆ. ವಿಶ್ವಾಮಿತ್ರನು ಹೊರತುಪಡಿಸಿ ಎಲ್ಲಾ ದೇವ ಮುನಿಗಳನ್ನು ಸ್ವಾಗತಿಸುವ ಹೊಣೆಯನ್ನು ನಾರದ ಮುನಿಗಳು ಆಂಜನೇಯನಿಗೆ ನೀಡುತ್ತಾರೆ. ನಾರದ ಮುನಿಗಳ ಆದೇಶವನ್ನು ಆಂಜನೇಯ ತಪ್ಪದೆ ಪಾಲಿಸುತ್ತಾನೆ. ಕೋಪಗೊಂಡ ವಿಶ್ವಾಮಿತ್ರ ...... ಅಗೌರವ ತೋರಿದ ಹನುಮಂತನ ಕೃತ್ಯಕ್ಕೆ ಮರಣದಂಡನೆ ಶಿಕ್ಷೆಯನ್ನು ವಿಧಿಸಬೇಕೆಂದು ರಾಮನನ್ನು ಆಗ್ರಹಿಸುತ್ತಾರೆ. ರಾಮನಿಗೆ ತನ್ನ ಗುರುವಿನ ಆಜ್ಞೆಯನ್ನು ನೇ ಗುರುವಿನ ಆಜ್ಞೆಯನ್ನು ನಿರ್ಲಕ್ಷಿಸಲಿಲ್ಲ. ಹನುಮಂತನಿಗೆ ಮರಣದಂಡನೆ ಯಾಯ್ತು.

 ಮುಂದೇನಾಯ್ತು ಗೊತ್ತಾ ಮರಣದಂಡನೆಗೊಳಗಾದ ಹನುಮಂತ ಬೇರೆನು ಯೋಚನೆ ಮಾಡಿದೆ ರಾಮ ನಾಮವನ್ನು ಜಪಿಸುತ್ತಿದ್ದ. ಹನುಮಂತನೇ ಅಖಂಡ ಭಕ್ತಿಗೆ ರಾಮನ ಯಾವ ಬಾಣವೂ ಆತನಿಗೆ ಹಾನಿ ಮಾಡಲಿಲ್ಲ ಇದನ್ನು ನೋಡಿ ಬೆರಗು ಗೊಂಡ ಶ್ರೀರಾಮ ತನ್ನ ಗುರುವಿನ ಆಜ್ಞೆಯನ್ನು ಪರಿಪಾಲಿಸಲು ವಿಶೇಷ ಆಯುಧವಾದ ಬ್ರಹ್ಮಾಸ್ತ್ರವನ್ನು ಹನುಮಂತನ ಮೇಲೆ ಪ್ರಯೋಗಿಸುತ್ತಾನೆ ಆದರೆ ಬ್ರಹ್ಮಾಸ್ತ್ರ ಕೂಡ ವಿಫಲಗೊಳ್ಳುತ್ತದೆ. ಈ ವಾಯುಪುತ್ರ ಅಖಂಡ ಭಕ್ತಿಗೆ ರಾಮ ಬಾಣವೇ ವಿಫಲಗೊಂಡು ಭಕ್ತಿ ಗೆಲ್ಲುತ್ತದೆ ಹಾಗೂ ಮರಣ ದಂಡನೆ ನಿಲ್ಲುತ್ತದೆ. ಇದು ಭಕ್ತಿಯ ಶಕ್ತಿಯನ್ನು ತೋರಿಸುತ್ತದೆ. ಭಕ್ತರ ನಿಜವಾದ ಭಕ್ತಿಗೆ ಬೆಲೆ ಏನೆಂಬುದಕ್ಕೆ ಇದೊಂದು ನಿದರ್ಶನ.

 ಆಂಜನೇಯ ಭಕ್ತರೇ ನಮಗೆ ಸರಿ ಎನಿಸಿದ ಭಕ್ತಿಯ ಮಾರ್ಗವನ್ನು ಆಯ್ದುಕೊಂಡು ಕಾಯ, ವಾಚ ಹಾಗೂ ಮನಸ್ಸಿನಿಂದ ಈ ಕೇಸರಿ ಪುತ್ರನನ್ನು ಧ್ಯಾನಿಸಿದರೆ ಸಂಕಷ್ಟಗಳ ಪರಿಹಾರ ಖಚಿತ 

|| ಓಂ ಆಂಜನೇಯಾಯ ನಮಃ||


ಗುರುವಾಣಿ – 5: ದೇವ ದೇವತೆಗಳನ್ನು ಒಲಿಸಿಕೊಳ್ಳಬೇಕಾದರೆ ಪೂಜೆ, ಪ್ರಾರ್ಥನೆ ಹಾಗೂ ತಪಸ್ಸಿನ ಅಗತ್ಯವಿದೆ.

ಗುರುವಾಣಿ – 5: ದೇವ ದೇವತೆಗಳನ್ನು ಒಲಿಸಿಕೊಳ್ಳಬೇಕಾದರೆ ಪೂಜೆ, ಪ್ರಾರ್ಥನೆ ಹಾಗೂ ತಪಸ್ಸಿನ ಅಗತ್ಯವಿದೆ.

Voice of RK

 

ಮಹಾಕಾಯ, ರತ್ನ ಕುಂಡಲ ಹಾಗೂ ಸಾಗರೋತ್ತಕ  ನೆಂದು ಸ್ತುತಿಸಲ್ಪಡುವ ಆಂಜನೇಯನ ಶಕ್ತಿ, ಸೇವಾ ಭಾವನೆ ಮತ್ತು ನಾಯಕತ್ವದ ಗುಣಗಳನ್ನು ನಾವೂ ಹೊಂದಲು ಇರುವ ತುಂಬಾ ಸುಲಭವಾದ ಮಾರ್ಗವೆಂದರೆ 

 ‘ಹನುಮಾನ್ ಚಾಲೀಸ ಪಠಣ ಹಾಗೂ ಪಾರಾಯಣ’. ವಾಯುಪುತ್ರನನ್ನು ವರ್ಣಿಸುವ ನಲವತ್ತು ಭಕ್ತಿಯ ಸುಂದರ ಪದ್ಯಗಳನ್ನು ಹದಿನಾರನೇ ಶತಮಾನದಲ್ಲಿ ಸಂತ ತುಳಸಿದಾಸರು ಹಿಂದಿಯ ಉಪಭಾಷೆ ‘ಆವಾದಿ’ ಯಲ್ಲಿ ರಚಿಸಿದ್ದಾರೆ.

ಈ ಭಕ್ತಿಯ ಪದ್ಯಗಳ ಅರ್ಥ ಮತ್ತು ಆಳ ಮಹಾ ಸಾಗರವಿದ್ದಂತೆ. ಈ ಸಾಗರದ ಒಂದು ಹನಿಯನ್ನು ಅರ್ಥ ಮಾಡಿಕೊಳ್ಳುವ ಪ್ರಯತ್ನವೇ ಇಂದಿನ ಗುರುವಾಣಿ.

‘ಗುರು ಚರಣ’ ವೆಂಬ ನುಡಿಯೊಂದಿಗೆ ಪ್ರಾರಂಭವಾಗುವ ಈ ಪದ್ಯ, ಭಗವಾನ್ ಶ್ರೀರಾಮನನ್ನು ಸಂಬೋಧಿಸುತ್ತದೆ.ಇದರಲ್ಲಿ ದಾಸರು ಏನು ಹೇಳುತ್ತಿದ್ದಾರೆ ಗೊತ್ತೇ?‘ಗುರುವಿನ ಪಾದದ ಧೂಳಿನಿಂದ’ನನ್ನ ಮನಸ್ಸಿನ ಕನ್ನಡಿಯನ್ನು ಶುದ್ಧ ಗೊಳಿಸುತ್ತಿದ್ದೇನೆ.. ಗುರು ಚರಣಕ್ಕೆ ಕಾಯ, ವಾಚ ಹಾಗೂ ಸಂಪೂರ್ಣ ಮನಸ್ಸಿನಿಂದ ನಮ್ಮನ್ನು ಸಮರ್ಪಿಸಿಕೊಂಡರೆ ಮನಸ್ಸಿನ ಕನ್ನಡಿ ಶುಭ್ರಗೊಂಡು, ಹೇಗೆ ಶುಭ್ರವಾದ ಕನ್ನಡಿ ಸ್ವಚ್ಛ ಬಿಂಬವನ್ನು ಪ್ರತಿಫಲಿಸುತ್ತದೆಯೋ ಹಾಗೆಯೇ ಸಮರ್ಪಿತವಾದ ನಮ್ಮ ಮನಸ್ಸು ಸಹಾ ಸದಾ ಉತ್ತಮ ಆಚಾರ ವಿಚಾರಗಳನ್ನು ಚಿಂತಿಸುತ್ತದೆ. ಸಂಕ್ಷಿಪ್ತ ರೀತಿಯಲ್ಲಿ ಹೇಳುವುದಾದರೆ ‘ಸಮರ್ಪಣಾ ಭಾವನೆ’ ಈ ಜೀವನದ ಶಾಂತಿ ಮತ್ತು ಸಮಾಧಾನದ ಮೂಲಮಂತ್ರ.

ಮುಂದುವರಿದ ಈ ಪದ್ಯದಲ್ಲಿ ತುಳಸಿದಾಸರು ತಾನು ಯಾರೆಂಬುದನ್ನು ವಿವರಿಸುತ್ತಾರೆ. “ವಾಯುಪುತ್ರ ನಾನೋ ಅಜ್ಞಾನಿ, ಲೌಕಿಕದ ಅರಿವಿಲ್ಲದ ಅಲ್ಪ ಜ್ಞಾನಿ 

 ನನಗೆ ಶಕ್ತಿ, ಬುದ್ಧಿ ಮತ್ತು ಜ್ಞಾನವನ್ನು ನೀಡಿ ದೇಹದ ಅಸ್ವಸ್ಥತೆಯನ್ನು ಮತ್ತು ಮಾನಸಿಕ ಅಪೂರ್ಣತೆಯನ್ನು ಗುಣಪಡಿಸು.. ಸಂತನ ಈ ಅರಿಕೆಯ ಅರ್ಥ- ನಮ್ಮಲ್ಲಿರುವ ಅಲ್ಪ ಜ್ಞಾನದ ಬಗ್ಗೆ ಗರ್ವ ಪಡದೆ ನಾನು ಅಜ್ಞಾನಿ, ಶೂನ್ಯ, ಹೊರ ಪ್ರಪಂಚದ ಅರಿವಿಲ್ಲವೆಂದು  ನಿಸ್ಸಂಕೋಚವಾಗಿ ಗುರುವಿನ ಮೊರೆ ಹೋದರೆ ಈ ಜೀವನ ಪಥದ ಒಂದು ಮೆಟ್ಟಿಲೇರಿದಂತೆಯೇ. ಇದರರ್ಥ ಗುರುವಿನ ಗುಲಾಮನಾಗುವ ತನಕ ಮುಕ್ತಿ ದೊರೆಯದು. ಗ್ರೀಕ್ ತತ್ವಜ್ಞಾನಿ ಸಾಕ್ರಟಿಸ್ ಹೇಳಿದಂತೆ ನಾನೇನೂ ಅರಿಯೆ ಎಂದು ಅರಿವುದೇ ನಿಜವಾದ ಜ್ಞಾನ.

ಆಂಜನೇಯ ಭಕ್ತರೇ ಹನುಮಾನ್ ಚಾಲೀಸ ಸ್ತೋತ್ರವನ್ನು ಕಂಠಸ್ಥ ಮತ್ತು  ಹೃದ್ಗತ ಮಾಡಿಕೊಂಡು ನಿತ್ಯ ಪಾರಾಯಣ ಮಾಡಿ ವಾಯುಪುತ್ರನ ಗುಣಗಳನ್ನು ನಮ್ಮಲ್ಲಿ ಮೈಗೂಡಿಸಿಕೊಂಡು, ಶಾಂತಿ, ಸಮಾಧಾನ ಹಾಗೂ ಪರಿಪೂರ್ಣ ಜೀವನದತ್ತ ಹೆಜ್ಜೆ ಹಾಕೋಣ.

|| ಓಂ ಆಂಜನೇಯಾಯ ನಮಃ||


ಗುರುವಾಣಿ 4: ಆಂಜನೇಯನ ವಿಶೇಷ ಪೂಜೆ ಶನಿವಾರದ ದಿನವೇ ಏಕೆ?

ಗುರುವಾಣಿ 4: ಆಂಜನೇಯನ ವಿಶೇಷ ಪೂಜೆ ಶನಿವಾರದ ದಿನವೇ ಏಕೆ?

 ಮನೋಜವಂ ಮಾರುತತುಲ್ಯವೇಗಂ 

ಜಿತೇಂದ್ರಿಯಂ ಬುದ್ಧಿಮತಾಂ ವರಿಷ್ಠಂ |

ವಾತಾತ್ಮಜಂ ವಾನರಯೂಥಮುಖ್ಯಂ

ಶ್ರೀರಾಮ ದೂತಂ ಶರಣಂ ಪ್ರಪದ್ಯೇ ||

Voice of RK -Guruvani


ಜ್ಞಾನ ಮತ್ತು ಗುಣಗಳ ಮಹಾಸಾಗರ ನಾಗಿರುವ ವಾಯುಪುತ್ರನ ಕೈಯಲ್ಲಿ ವಜ್ರಾಯುಧ ಹಾಗೂ ಕೇಸರಿ ಪತಾಕೆ. ವಜ್ರಾಯುಧ ಧಾರಣೆ ಈ ಪವನ ಸುತನ ಕಠಿಣತೆಯನ್ನು ಬಿಂಬಿಸಿದರೆ, ಕೈಯಲ್ಲಿರುವ ಧ್ವಜ ವಿಜಯದ ಸಂಕೇತ. ಆದ್ದರಿಂದಲೇ ಆಂಜನೇಯನನ್ನು ಸಂಕಟ ಮೋಚನ ಎಂದು ಸಂಬೋಧಿಸುತ್ತಾರೆ. ದುಃಖ ಮತ್ತು ಸಂಕಟದಲ್ಲಿರುವಾಗ ಈ ರಾಮ ದೂತನ ಸ್ಮರಣೆ ಮನಸ್ಸಿಗೆ ಶಾಂತಿಯನ್ನು ಮತ್ತು ಸಂಕಷ್ಟಕ್ಕೆ ಪರಿಹಾರವನ್ನು ನೀಡುತ್ತದೆ.

 ವೀರ ಆಂಜನೇಯ ಜನಪ್ರಿಯ ಹಿಂದೂ ದೇವತೆ ಆಗಿದ್ದರೂ, ಜೈನ ಮತ್ತು ಬೌದ್ಧ ಧರ್ಮ ಗ್ರಂಥಗಳಲ್ಲಿಯೂ ಆಂಜನೇಯನ ವ್ಯಕ್ತಿತ್ವದ ಉಲ್ಲೇಖವಿದೆ. ಉಪಖಂಡಗಳಾದ ಮಲೇಷಿಯಾ, ಇಂಡೋನೇಷ್ಯಾ, ಥಾಯ್ಲೆಂಡ್ ಮತ್ತು ಕಾಂಬೋಡಿಯ ದೇಶಗಳ ಪುರಾಣ ಕಥೆಗಳಲ್ಲಿ ಹನುಮಂತನ ಉಲ್ಲೇಖವಿರುವುದು ಒಂದು ವಿಶೇಷವೇ ಸರಿ. ಇದು ಪವನ ಪುತ್ರನ ಸರ್ವಲೋಕ ಸದ್ಗುಣ ಸಾಗರ ಗುಣವನ್ನು ಪ್ರತಿಬಿಂಬಿಸುತ್ತದೆ. ಎಲ್ಲ ಧರ್ಮಗಳಲ್ಲಿ ಈ ವಾಯುಪುತ್ರನನ್ನು ವೀರ, ಧೈರ್ಯಶಾಲಿ, ವಿದ್ವಾಂಸನೆಂದು ಬಿಂಬಿಸಲಾಗಿದೆ. ಇದನ್ನೇ ಸಂತ ತುಳಸಿದಾಸರು ಜ್ಞಾನ ಗುಣಗಳ ಸಾಗರ ನೆಂದು ವರ್ಣಿಸಿದ್ದಾರೆ.

ಅಲಂಕಾರ ಪ್ರಿಯನಾದ ಆಂಜನೇಯನನ್ನು ವಿಶೇಷವಾಗಿ ಮಂಗಳವಾರ ಮತ್ತು ಶನಿವಾರ ಪೂಜಿಸಿದರೆ ಎಲ್ಲವೂ  ಫಲಿಸುತ್ತದೆ ಎಂಬ ನಂಬಿಕೆ ಇದೆ. ಆದರೆ ಶನಿವಾರದಂದು ಆಂಜನೇಯನ ದರ್ಶನ ಸ್ಮರಣೆ ಹಾಗೂ ಪ್ರಾರ್ಥನೆಗೆ ವಿಶೇಷವಾದ ಮಹತ್ವವಿದೆ. ಒಂದು ಗ್ರಂಥ ಮೂಲದ ಪ್ರಕಾರ ಲಂಕಾಧೀಶ ನಾದ ರಾವಣ ಗ್ರಹಗಳನ್ನು ನಿಯಂತ್ರಿಸುವಷ್ಟು ಶಕ್ತಿಶಾಲಿಯಾಗಿದ್ದ.  ಹುಟ್ಟುವ ನವಜಾತ ಶಿಶು ಅಮರ ಮತ್ತು ಅಜೇಯನಾಗುತ್ತಾನೆ ಎಂಬ ನಂಬಿಕೆಯಿಂದ, ಆತನ ಪುತ್ರ ಮೇಘನಾದನ ಜನನದ ಸಮಯದಲ್ಲಿ ಎಲ್ಲ ಗ್ರಹಗಳನ್ನು ಅಪಹರಿಸಿ ಜ್ಯೋತಿಷ್ಯ ಶಾಸ್ತ್ರದ ಕುಂಡಲಿಯ ಹನ್ನೊಂದನೆ ಮನೆಯಲ್ಲಿ ಇರಿಸುತ್ತಾನೆ. ಇದರಿಂದ ನವಜಾತ ಶಿಶು ಅಮರ ಮತ್ತು ಅಜೇಯ ನಾಗುತ್ತಾನೆ ಎಂಬ ನಂಬಿಕೆ. ಆದರೆ ಶನಿ ಈ ಸ್ಥಾನದಿಂದ ಹೊರ ಹೋಗಲು ಪ್ರಯತ್ನಿಸಿದಾಗ ಕೋಪಗೊಂಡ ರಾವಣ ಶನಿಯನ್ನು ಶಿಕ್ಷಿಸುತ್ತಾನೆ. ಸಂಕಷ್ಟದಲ್ಲಿರುವ ಶನಿಯನ್ನು ಸಂಕಟ ಮೋಚನ ಆಂಜನೇಯ ರಕ್ಷಿಸುತ್ತಾನೆ.  ರಕ್ಷಿಸಲ್ಪಟ್ಟ ಶನಿ ಆಂಜನೇಯನಿಗೆ ವಿಶೇಷವಾದ ವರವನ್ನು ನೀಡುತ್ತಾನೆ. ಆದ್ದರಿಂದ ಯಾರು ಆಂಜನೇಯನನ್ನು ಶನಿವಾರ ವಿಶೇಷವಾಗಿ ಪೂಜಿಸುತ್ತಾರೋ ಅವರು ಶನಿಯ ದುಷ್ಪರಿಣಾಮಗಳಿಂದ ಮುಕ್ತರಾಗುತ್ತಾರೆ.

 ಆಂಜನೇಯ ಭಕ್ತರೇ, ಶುಭ್ರ ಮನಸ್ಸಿನಿಂದ ಭಕ್ತಿಯೆಂಬ ದೀಪದ ಹಣತೆಯನ್ನು ಪ್ರತಿ ಶನಿವಾರ ವಿಶೇಷವಾಗಿ ಶ್ರೀ ಆಂಜನೇಯ ಸ್ವಾಮಿಗೇ ಅರ್ಪಿಸೋಣ, ಹಾಗೂ ಈ ಜೀವನ ಪಥದಲ್ಲಿ ಮುಂದೆ ಮುಂದೆ ನಾವೆಲ್ಲರೂ ಸಾಗೋಣ.

|| ಓಂ ಆಂಜನೇಯಾಯ ನಮಃ||








ಗುರುವಾಣಿ 3: ವಾಯುಪುತ್ರನ ವ್ಯಕ್ತಿತ್ವ

 || ಓಂ ಆಂಜನೇಯಾಯ ನಮಃ||
ಗುರುವಾಣಿ 3:   ವಾಯುಪುತ್ರನ ವ್ಯಕ್ತಿತ್ವ 



ಸರ್ವವಂದಿತ ಲೋಕಪೂಜಿತ ವಾಯುಪುತ್ರನ ವ್ಯಕ್ತಿತ್ವವನ್ನ ಅರ್ಥ ಮಾಡಿಕೊಳ್ಳುವ ಚಿಕ್ಕ ಪ್ರಯತ್ನವೇ ಇಂದಿನ ಗುರುವಾಣಿ. ಶ್ರೀ ರಾಮನ ಅತ್ಯಂತ ನಿಷ್ಠಾವಂತ/ ಪರಮ ಸೇವಕ, ರಾಮಕಥ ಲೋಲ ಆಂಜನೇಯ ಶ್ರೀ ರಾಮನಿಗೆ ತೋರಿದ ಭಕ್ತಿ ಮತ್ತು ಪ್ರೀತಿಯಿಂದಲೇ ಇತರ ದೇವತೆಗಳ ಪ್ರೀತಿಯನ್ನು ಗಳಿಸಿ ಸರ್ವಜನ ಸರ್ವಪೂಜಿತನಾದ .ಇದು ಈ ವಾಯುಪುತ್ರನ  ಸಾಮರಸ್ಯದ ಗುಣವನ್ನು ತೋರಿಸುತ್ತದೆ. 

 ಒಮ್ಮೆ ಸೀತಾದೇವಿ ಹನುಮಂತನಿಗೆ ಮುತ್ತಿನ ಹಾರವನ್ನು ಉಡುಗೊರೆಯಾಗಿ ನೀಡುತ್ತಾಳೆ. ಹನುಮಂತ ಏನು ಮಾಡುತ್ತಾನೆ ಗೊತ್ತ? ಪ್ರತಿಯೊ ಮುತ್ತನ್ನೂ ಕೂಲಂಕಷವಾಗಿ/ಸೂಕ್ಷ್ಮವಾಗಿ ಪರಿಶೀಲಿಸಿ, ಆ ಮುತ್ತಿನ ಹಾರವನ್ನು ಪಕ್ಕಕ್ಕೆ ಎಸೆಯುತ್ತಾನೆ. ಆಶ್ಚರ್ಯಚಕಿತಳಾದ ಸೀತಾ ಮಾತೆ ಇದಕ್ಕೆ ಕಾರಣವನ್ನು ಕೇಳಿದಾಗ ಆಂಜನೇಯ ಹೀಗೆ ಉತ್ತರಿಸುತ್ತಾನೆ.” ಮುತ್ತುಗಳು  ಅಮೂಲ್ಯವೇ ಸರಿ.  ಆದರೆ ಮುತ್ತಿಗಿಂತ ಅಮೂಲ್ಯವಾದ ನನ್ನ ಗುರುವರ್ಯ ಆದರ್ಶಪುರುಷ ಶ್ರೀ ರಾಮನನ್ನಾಗಲಿ ಅಥವಾ ಆತನ ಹೆಸರನ್ನಾಗಲೀ ಅದರಲ್ಲಿ ಕಾಣಲಾಗಲಿಲ್ಲ. ಎಲ್ಲಿ ಅಥವಾ ಯಾವುದರಲ್ಲ್ಲಿ ಶ್ರೀ ರಾಮನಿಲ್ಲವೋ ಆ ವಸ್ತು, ಆ ಸಮಯ, ಆ ಪ್ರದೇಶ ನಿಷ್ಪ್ರಯೋಜಕ” ಎಂದು ಹೇಳುತ್ತಾನೆ. ಈ ಪವನಪುತ್ರನ ಗುರುಕಾಯಕ ನಿಷ್ಠೆಯಿಂದ ನಾವೇನು ಕಲಿಯಬಹುದೆಂದರೆ, ನಮ್ಮ ಕಾಯಕ ಅಥವಾ ವೃತ್ತಿ ಯಾವುದೇ ಆಗಿರಲಿ ಸಂಪೂರ್ಣ ನಿಸ್ವಾರ್ಥತೆಯಿಂದ, ಅಲ್ಪ ಲಾಭ ಅಥವಾ ಆಕರ್ಷಣೆಗೆ ಒಳಗಾಗದೆ ನಮ್ಮ ಕಾರ್ಯಕ್ಕೆ ಬದ್ಧರಾಗಿ ಮುನ್ನಡೆದರೆ ಅದೇ ಕೈಲಾಸ ಹಾಗೂ ಸಾರ್ಥಕ ಜೀವನ. ಇದೇ ನಾವು ವಾಯುಪುತ್ರನಿಂದ ಕಲಿಯಬೇಕಾದ ಆದರ್ಶ ಜೀವನದ ಸರಳ ಸೂತ್ರ. ವಾಯುಪುತ್ರನಿಂದ. ಇನ್ನೊಂದು ದುಷ್ಟಾಂತ. ಸೀತೆಯ ಅಪಹರಣದ ನಂತರ ಈ ವಾನರವೀರ ವಾನರ ಕೂಟದ ಇತರ ಸದಸ್ಯರೊಂದಿಗೆ ಸೀತಾ ಮಾತೆಯ ಹುಡುಕಾಟಕ್ಕೆ ಅಣಿಯಾಗುತ್ತಾನೆ. ಹಗಲು ರಾತ್ರಿ ಕಾಡು ಮೇಡು, ಗಿರಿ ಕಣಿವೆ, ಪರ್ವತ, ಮರುಭೂಮಿಯನ್ನ್ನು ಸುತ್ತಾಡಿ ದಕ್ಷಿಣದ ತುದಿಯ ಸಮುದ್ರ ತೀರಕ್ಕೆ ತಲುಪುತ್ತಾನೆ. ಆದರೆ ಸೀತಾ ಮಾತೆ ಮಾತ್ರ ಕಾಣಿಸುವುದಿಲ್ಲ. ಇನ್ನೇನು ಈ ವ್ಯರ್ಥ/ ಹುಡುಕಾಟವನ್ನು ಅಂತ್ಯ ಮಾಡಬೇಕು ಅಂದುಕೊಳ್ಳುವಾಗ ಸೀತೆಯ ಅಪಹರಣ  ಲಂಕಾಧಿಪತಿ ರಾವಣನಿಂದ ನಡೆದಿದೆ ಎಂಬ ವಿಷಯ ಎಲ್ಲಾ ಕಡೆಯಿಂದ ಬರಲಾರಂಭಿಸಿತ್ತದೆ. ಸುದ್ದಿ ವಾನರ ವೀರರಿಗೆ ಸಿಹಿಯಾಗಿದ್ದರೂ ಸಹ/ಸಂತೋಷ ಕೊಟ್ಟರೂ ಸಹ ಸಮುದ್ರವನ್ನು ದಾಟಿ ಲಂಕೆಗೆ ಹೋಗುವುದು ಅಷ್ಟು ಸುಲಭದ ಮಾತಾಗಿರಲಿಲ್ಲ. ಇದು ಆ ಸಿಹಿ ಸುದ್ದಿಯನ್ನು ಕ್ಷಣಾರ್ಧದಲ್ಲಿ ಕಹಿ ಆಗುವಂತೆ ಮಾಡುತ್ತದೆ.  ಆದರೆ ಕಪಿಶ್ರೇಷ್ಠ, ವಾನರವೀರ, ವೀರಾಂಜನೇಯ ಎದೆಗುಂದಲಿಲ್ಲ. ತನ್ನಲ್ಲಿರುವ ಶಕ್ತಿಯಲ್ಲಿ ಅದಕ್ಕೆಅಗತ್ಯವಾದುದನ್ನು 

 ಉಪಯೋಗಿಸಿ ಸ್ವರೂಪವನ್ನ್ನು ಬದಲಿಸಿಕೊಂಡು, ತನ್ನ ಸಾಮರ್ಥ್ಯವನ್ನು/ಶಕ್ತಿಯನ್ನು ಹೆಚ್ಚಿಸಿಕೊಂಡು ಲಂಕೆಗೆ ಜಿಗಿದ. ಇದಾದ ನಂತರ ಏನಾಯಿತೆಂಬುದು ನಿಮಗೆಲ್ಲ ತಿಳಿದ ವಿಷಯ.

 ಆಂಜನೇಯನ ದೃಢ ನಿರ್ಧಾರದಿಂದ ನಾವೇನು ಕಲಿಯಬಹುದೆಂದರೆ ನಮ್ಮೆಲ್ಲರಲ್ಲೂ ಒಂದು ವಿಶೇಷವಾದ ಸಾಮರ್ಥ್ಯವಿರುತ್ತದೆ ಆದರೆ ನಾವು ನಮ್ಮ ಸಾಮರ್ಥ್ಯವನ್ನು ತಿಳಿಯದೆ ಇದ್ದಿದ್ದರಲ್ಲೇ ತೃಪ್ತಿ ಕಾಣಬಯಸುತ್ತೇವೆ. ಆದರೆ ಆಂಜನೇಯನಾದರೋ ತನ್ನ ಸಾಮರ್ಥ್ಯವನ್ನು ಅರಿತು ಲಂಕೆಗ ಜಿಗಿದ. 

ಸಾಧನೆಗೆ ಅಸಾಧ್ಯವಾದುದು  ಯಾವುದೂ ಇಲ್ಲ. ಆದರೆ ನಾವು ನಮ್ಮಲ್ಲಿರುವ ಸಾಮರ್ಥ್ಯವನ್ನ ಅರಿತು ಅದರಂತೆ ಕಾರ್ಯ ವಹಿಸಿದರೆ ಜಯ ದೊರೆಯುವುದು ಖಂಡಿತ/ಖಚಿತ.

 ವೀರಂಜಾನೇಯನನ್ನು ಆದರ್ಶವಾಗಿಟ್ಟುಕೊಂಡು ಅವನ ನಾಮಸ್ಮರಣೆಯೊಂದಿಗೆ ನಾವೆಲ್ಲರೂ ಈ ಜೀವನ ಪಥದಲ್ಲಿ ಮುಂದೆ ಮುಂದೆ ಸಾಗೋಣ.

|| ಓಂ ಆಂಜನೇಯಾಯ ನಮಃ||

Voice of RK




Friday, June 11, 2021

ಗುರುವಾಣಿ 2 : ಆಂಜನೇಯನ ಭವ್ಯ ವ್ಯಕ್ತಿತ್ವದ ವರ್ಣನೆ

 || ಓಂ ಆಂಜನೇಯಾಯ ನಮಃ||
 ಗುರುವಾಣಿ 2 : ಆಂಜನೇಯನ ಭವ್ಯ ವ್ಯಕ್ತಿತ್ವದ ವರ್ಣನೆ



ಅಯೋಧ್ಯೆಯ ಮರ್ಯಾದಾ ಪುರುಷನಾದ ಶ್ರೀ ರಾಮನ ಪರಮ ಭಕ್ತ, ಜ್ಞಾನ ಗುಣಗಳ ಸಾಕಾರನಾದ ಕಪಿಶ್ರೇಷ್ಠ ಶ್ರೀ ಆಂಜನೇಯನ  ವರ್ಣನೆಯೇ ಇಂದಿನ ಗುರುವಾಣಿ.

.ಶ್ರೀ ತುಳಸಿದಾಸರು ಹನುಮಾನ್ ಚಾಲಿಸದಲ್ಲಿ ಆಂಜನೇಯನ ಭವ್ಯ ವ್ಯಕ್ತಿತ್ವದ ವರ್ಣನೆ ಮಾಡಿರುತ್ತಾರೆ. ಇದರ ಆಯ್ದ ಭಾಗಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳುವ ಪ್ರಯತ್ನ ನಾವಿಂದು ಮಾಡುತ್ತಿದ್ದೇವೆ.

ಹನುಮಂತ ಹೇಗಿದ್ದ ಎನ್ನುವುದು ನಿಮಗೆ ತಿಳಿದಿದೆಯೇ? ಹೊಳೆವ ಹೊನ್ನ ಮೈಬಣ್ಣ, ಸುರಳಿ ಸುರಳಿಯಾದ ಕೇಶ ರಾಶಿ,.ಕಿವಿಯಲ್ಲಿ ಕರ್ಣಕುಂಡಲ, ಸುಂದರ ವಸ್ತ್ರದ ಉಡುಗೆ ಧರಿಸಿದ ಈ ಬಲಶಾಲಿಯ ಒಂದು ಕೈಯಲ್ಲಿ ವಜ್ರಾಯುಧ ಮತ್ತೊಂದು ಕೈಯಲ್ಲಿ ವಿಜಯದ ಧ್ವಜ, ದಬ್ಬೆಯ ಒಂದು ಉಪವೀತನವನ್ನು ಭುಜದ ಮೇಲೆ ಧರಿಸಿರುವ ಈತನಿಗೆ ಇಡೀ ಭೂ ಮಂಡಲವೇ ತಲೆಬಾಗಿ ನಮಿಸುತ್ತದೆ.   

ಇದು ಕಪಿಶ್ರೇಷ್ಠನ ಕಠಿಣತೆ, ದೃಡನಿರ್ಧಾರ ಮತ್ತು ಶ್ರೇಷ್ಠತೆಯನ್ನು ತೋರಿಸುತ್ತದೆ. ವಿದ್ಯಾವಂತ, ಗುಣವಂತ ಅತಿ ಚತುರ. ಶ್ರೀ ರಾಮನ ಸೇವಾ ಕೈಂಕರ್ಯಕ್ಕೆ  ಕಾತುರನಾಗಿರುವ ಈತ ಸೂಕ್ಷ್ಮ ರೂಪ ಹೊಂದಿ ಸೀತಾಮಾತೆಯನ್ನು ಕಂಡ, ಹಾಗೂ ವಿಕಟ  ರೂಪವನ್ನು ಹೊಂದಿ ಲಂಕೆಯನ್ನೇ ಸುಟ್ಟ. ಇದು ಪವನಸುತನ ಸಂದರ್ಭಕ್ಕೆ ಹೊಂದಿಕೊಳ್ಳುವ ಹಾಗೂ  ತಕ್ಕನಾಗಿ ವರ್ತಿಸುವ ಅತಿಚತುರತೆಯ ವ್ಯಕ್ತಿತ್ವವನ್ನ ಬಿಂಬಿಸುತ್ತದೆ. ಸಂಜೀವಿನಿಯನ್ನು ತಂದು  ಲಕ್ಷಮಣನನ್ನು ಬದುಕಿಸಿ, ಸುಗ್ರೀವನಿಗೆ ರಾಮನನ್ನು ಪರಿಚಯಿಸಿ, ಪುನಹ  ರಾಜ ಪದವಿಯನ್ನು ಕೊಡಸಿದ. ಈ ಅಂಜನಸುತನನ್ನು ಸಾವಿರ ವಚನಗಳು ಈ ಯಶಸ್ಸಿನ ವೈಭವವನ್ನು ಹಾಡುತ್ತದೆ.ಆಂಜನೇಯನ ವೈಭವ ಸಪ್ತ ಸಾಗರಗಳಿಗೂ ಮಿಗಿಲಾದುದ್ದು. ಸಾಧು ಸಂತರು, ಮುನಿಗಳು, ನಾರದರು, ಶಾರದೆ, ಆಧಿಶೇಷ  ಕುಬೇರ ಇವರುಗಳಿಗೆ  ಸಹ ಪವನಸುತನ ವರ್ಣನೆ ಅಸಾಧ್ಯವಾದ ಮಾತು. ಆಂಜನೇಯನ ಬಲಕ್ಕೆ ಮೂರು ಲೋಕಗಳು ಹೆದರುತ್ತವೆ, ಹೆಸರು ಕೇಳಿದರೆ ಭೂತ ಪಿಸಾಚಿಗಳು  ಹತ್ತಿರ ಸುಳಿಯುವುದಿಲ್ಲ. ಯಾರು ಅತಿ ಬಲವಂತನನ್ನು ಕಾಯಾ, ವಾಚ ಹಾಗೂ ಮನಸ್ಸಿನಿಂದ ಧ್ಯಾನಿಸುತ್ತಾರೋ ಅವರ ಸಂಕಷ್ಟಗಳು ದೂರವಾಗುತ್ತದೆ.  ಕೇಸರಿಪುತ್ರನೆ  ನೀನು ಸಾಧು ಸಂತರ ರಕ್ಷಕ, ಅಸುರರ ಸಂಹಾರಕ, ರಾಮಪ್ರಿಯ.ನಿನ್ನ ವೈಭವ ನಾಲ್ಕು ಯುಗಗಳಲ್ಲಿಯು ಪ್ರಚಲಿತ. ದೇವಾದಿದೇವ, ಸಂಕಷ್ಟ ನಿವಾರಕ, ಇಂದ್ರೀಯಗಳ ಒಡೆಯ ನಮಗೆಲ್ಲರಿಗೂ ವಿಧ್ಯ, ಬುದ್ದಿ, ಬಲ ಮತ್ತು ಆರೋಗ್ಯವನ್ನು ದಯಪಾಲಿಸು. ಶ್ರೀ ಶಂಕರ ಅವತಾರಿ ಪವನಸುತನೆ, ನಿನ್ನ ನಾಮಸ್ಮರಣೆಯೊಂದೆ ನಮ್ಮ ಕಾಯಕವಾಗಿರಲಿ. 

|| ಓಂ ಆಂಜನೇಯಾಯ ನಮಃ||

Voice of RK



Wednesday, June 2, 2021

ಗುರುವಾಣಿ 1 ಆಂಜನೇಯನ ಜನ್ಮ ರಹಸ್ಯ

 

|| ಓಂ ಆಂಜನೇಯಾಯ ನಮಃ||

ಗುರುವಾಣಿ 1: ಆಂಜನೇಯನ ಜನ್ಮ ರಹಸ್ಯ

Guruvani - Voice of RK

ವಾಯುಪುತ್ರ ಹಾಗೂ ಶ್ರೀ ರಾಮನ ಅಪ್ಪಟ ಭಕ್ತ ಹನುಮಂತನ ಬಗ್ಗೆ ಯಾರಿಗೆ ತಾನೇ ಗೊತ್ತಿಲ್ಲ. ಅಂಜನಾ ದೇವಿಯ ಮಗನಾದ  ಈತನಿಗೆ ಮಾರುತಿ, ವಾನರವೀರ, ಮಹಾಕಾಯ, ಚಿರಂಜೀವಿ ಮುಂತಾದ ಹೆಸರುಗಳಿವೆ. (ಆಂಜನೇಯ ಅತಿ ಬಲಶಾಲಿ. ಆಕಾಶದಲ್ಲಿ ವಾಯುವಿನ ವೇಗದಲ್ಲಿ ಈತ ಹಾರಬಲ್ಲ.) ಚಿಕ್ಕ ಹುಡುಗನಾಗಿದ್ದಾಗ ಸೂರ್ಯನನ್ನು ನೋಡಿ ಹಣ್ಣು ಎಂದು ಭ್ರಮಿಸಿ ಅದನ್ನು ಹಿಡಿಯಲು ಆಕಾಶಕ್ಕೆ ಜಿಗಿಯುತ್ತಾನೆ, ಇದನ್ನು ನೋಡಿದ ದೇವೇಂದ್ರ ತನ್ನ ವಜ್ರಾಯುಧದಿಂದ ಆತನಿಗೆ ಹೊಡೆಯುತ್ತಾನೆ. ಆ ಬಾಲಕ ಬಂಡೆಯ ಮೇಲೆ ಬಿದ್ದು ಆತನ ಕೆನ್ನೆ ಊದಿಕೊಳ್ಳುತ್ತದೆ.ಅಂದಿನಿಂದ ಈ ಬಾಲಕ ಹನುಮಂತನಾದ

 ರಾಮಾಯಣ ಗ್ರಂಥದಲ್ಲಿ ವಿಶೇಷ ಸ್ಥಾನ ಪಡೆದಿರೋ ಹನುಮಂತ ಅತಿ ಮುಗ್ದ. ಈತ ತನ್ನ ಮುಗ್ದತೆಯಿಂದ ತನ್ನ ಎದೆಯನ್ನೇ ಬಗೆದು ಅದರೊಳಗಿದ್ದ ರಾಮನನ್ನು ತೋರಿಸುತ್ತಾನೆ. ಹನುಮಂತ ಈಶ್ವರನ ಅವತಾರವೇ ಅಥವಾ ಶ್ರೀ ವಿಷ್ಣುವಿನ ಅವತಾರವೇ ಎಂಬುದರ ಬಗ್ಗೆ ಅನೇಕ ಗ್ರಂಥಗಳಲ್ಲಿ ಚರ್ಚೆ ನಡೆದಿದೆ. ಆದರೆ ಇದು ನಮ್ಮ ಚರ್ಚೆಯ ವಿಷಯವಾಗದೆ ದೇವನೊಬ್ಬ ನಾಮ ಹಲವು ಎಂದು ಪರಿಗಣಿಸಿ, ಈಶ್ವರ ಅವತಾರಿಯಾದ ಈ ವಾಯುಪುತ್ರನ ಜನುಮದ ಬಗ್ಗೆ ಒಂದು ಮಾತು. ರಾಮ ಭಕ್ತನ ಜನುಮದ ಬಗ್ಗೆಯೂ ಸಹ ಗ್ರಂಥಗಳಲ್ಲಿ ವಿಭಿನ್ನ ಉಲ್ಲೇಕವಿರುತ್ತದೆ . ಒಂದು  ಮೂಲದ ಪ್ರಕಾರ ಮಾತೆ ಅಂಜನಾ ಹನುಮಂತನ ತಾಯಿ. ಹಿಂದಿನ ಜನ್ಮದಲ್ಲಿ ಈಕೆ ಅಪ್ಸರೆಯಾಗಿ ಇಂದ್ರನ ಆಸ್ಥಾನದಲ್ಲಿದ್ದಳು. . ಒಮ್ಮೆ ಧ್ಯಾನದಲ್ಲಿ ತೊಡಗಿದ್ದ ಸನ್ಯಾಸಿ ಒಬ್ಬರ ತಪಸ್ಸಿನ ಭಂಗಕ್ಕೆ ಪ್ರಯತ್ನ ಮಾಡುತ್ತಾಳೆ. ಇದರಿಂದ ಕುಪಿತಗೊಂಡ ಸನ್ಯಾಸಿ ಮುಂದಿನ ಜನ್ಮದಲ್ಲಿ ಕೋತಿ ಆಗು ಎಂದು ಶಪಿಸುತ್ತಾನೆ. ಈ ಶಾಪ ವಿಮೋಚನೆಗಾಗಿ ಈಕೆ ಇಂದ್ರನನ್ನ ಪ್ರಾರ್ಥಿಸಿಕೊಳ್ಳುತ್ತಾಳೆ, ತನಗೆ ಮುಕ್ತಿ ಕೊಡಬೇಕೆಂದು ಬೇಡಿಕೊಳ್ಳುತ್ತಾಳೆ. ಇವಳ ಪ್ರಾರ್ಥನೆಗೆ ಸ್ಪಂದಿಸಿದ ಇಂದ್ರ ಭೂಮಿಯ ಮೇಲೆ ಪುನಹ ಜನಿಸು ಎಂದು ವರ ಕೊಡುತ್ತಾನೆ. ಇಂದ್ರನ ಶಾಪ ವಿಮೋಚನೆಯಂತೆ ಈಕೆ ಅಂಜನ ಎಂಬ ಹೆಸರಿನಿಂದ ಜನ್ಮ ಪಡೆದುಕೊಳ್ಳುತ್ತಾಳೆ. ಮುಂದೆ ವಾನರ ರಾಜನಾದ ಕೇಸರಿ ಯೊಂದಿಗೆ ಪರಸ್ಪರ ಒಪ್ಪಿ ಮದುವೆಯಾಗುತ್ತಾರೆ. ಆದರೆ ಈ ದಂಪತಿಗಳಿಗೆ ಧೀರ್ಘಕಾಲದ ತನಕ ಸಂತಾನ ಭಾಗ್ಯವಿರಲಿಲ್ಲ. ಈ  ಸಮಸ್ಯೆಯಿಂದ ಪಾರಾಗಲು ಋಷಿಮುನಿಯ ಪರಿಹಾರ ಸೂಚನೆಯಂತೆ ಹನ್ನೆರಡು ವರ್ಷಗಳ ಕಾಲ ಶಿವನನ್ನ  ಆರಾಧಿಸುತ್ತಾಳೆ. ಈ ಧೀರ್ಘ ತಪಸ್ಸಿಗೆ ಒಲಿದ ಈಶ್ವರ ಪ್ರಸನ್ನನಾಗಿ ಪುತ್ರ ಸಂತಾನವನ್ನು ಹರಿಸುತ್ತಾನೆ. ಇದರ ಬಳಿಕ ಅಂಜನ ವಾನರ ಮಗನ ಬಾಲಕನಿಗೆ  ಜನ್ಮನೀಡುತ್ತಾಳೆ. ಈತನೇ ಈಶ್ವರನ ಸ್ವರೂಪಿ ಶ್ರೀ ರಾಮನ ಪರಮ ಭಕ್ತ ಆಂಜನೇಯ. ಕೇಸರಿಪುತ್ರ, ವಾಯುಪುತ್ರ ಇದೇ ಮೊದಲಾದ ನಾಮದ್ಯೇಯ ಗಳಿಂದ ಜಗದ್ವಿಖ್ಯಾತನಾಗುತ್ತಾನೆ. ಹನುಮಂತನ ಜನನದ ನಂತರ ಶಾಪ ವಿಮೋಚನೆಗೊಂಡ ಅಂಜನಾದೇವಿ ಸ್ವರ್ಗಲೋಕಕ್ಕೆ ಹಿಂತಿರುಗುತ್ತಾಳೆ. ಭಕ್ತಿ ಮತ್ತು ಸಮರ್ಪಣೆಗೆ ಪ್ರತಿರೂಪವಾಗಿರುವ ಈ ಆಂಜನೇಯನನ್ನು ನಾವು ಮತ್ತೆ ಮತ್ತೆ ಸ್ಮರಿಸೋಣ.

|| ಓಂ ಆಂಜನೇಯಾಯ ನಮಃ||

Voice of RK